ಬ್ಯಾಂಟಿಂಗ್ ವಿಲಿಯಮ್ 
	1797-1878. ತನ್ನ ಹೆಸರನ್ನೇ ಹೊಂದಿರುವ ಸ್ಥೂಲಕಾಯ ನಿವಾರಕ ಆಹಾರದ ಪ್ರಚಾರ ಮಾಡಿ ಪ್ರಸಿದ್ಧಿ ಪಡೆದ ಇಂಗ್ಲಿಷ್ ವ್ಯಕ್ತಿ. ಸ್ವತಃ ಅತಿ ಸ್ಥೂಲಕಾಯದ ಈತ ಆಹಾರದ ಹತೋಟಿಯಿಂದ ಬೊಜ್ಜು ಕರಗಿಸಿಕೊಂಡ. ಅಲ್ಲದೆ ಇತರರಿಗೂ ಈ ಮಾರ್ಗ ತಿಳಿಯಹೇಳಿ ಪ್ರಸಿದ್ಧನಾದ. ಈತನ ಕಸಬು ಮರಗೆಲಸ ಮತ್ತು ಸಮಾಧಿಕ್ರಿಯೆಗೆ ಸವಣಿಸಿ ಕೊಡುವುದು. 165 ಸೆಂಮೀ ಎತ್ತರವಿದ್ದ ಈತ 60ನೆಯ ವಯಸ್ಸಿನಲ್ಲಿ ತನ್ನ ಶೂಲೇಸು ಕಟ್ಟಲು ಬಗ್ಗಲಾರದಷ್ಟು ಮಹಾಕಾಯನಾಗಿದ್ದ. ಬೆಳೆದ ಬೊಜ್ಜಿನ ಮುಂಭಾರದಿಂದ ಮೆಟ್ಟಲು ಇಳಿಯಲಾಗದೆ ಹಿಮ್ಮೊಗವಾಗಿ ಇಳಿಯಬೇಕಾಗಿತ್ತು. ವೈದ್ಯರ ಸಲಹೆಯಂತೆ ಹೆಚ್ಚು ದೂರ ವೇಗವಾಗಿ ನಡೆಯುವುದೂ, ದೋಣಿ ಹುಟ್ಟು ಹಾಕುವುದೂ ಮೇಲಿಂದಮೇಲೆ ಅತಿಯಾದ ಶುಷ್ಕೋಷ್ಣತೆಯಲ್ಲಿ ಬೆವರಿಸಿಕೊಳ್ಳುವುದೂ ಇತ್ಯಾದಿ ಪ್ರಯತ್ನಗಳಿಂದ ಈತನ ಹಸಿವು ಇನ್ನೂ ಹೆಚ್ಚಾಗಿ ತೂಕ ಮತ್ತಷ್ಟು ಹೆಚ್ಚಿತು. ವಯಸ್ಸು 65 ಅದಾಗ ಇವನ ತೂಕ 105 ಕೆಜಿಗೆ ಏರಿತು. ಕಿವುಡು ಹೋಗಲಾಡಿಸಲು ಈತ ವಿಲಿಯಮ್ ಹಾರ್ವೆ ಎಂಬ ಶ್ರವಣ ಚಿಕಿತ್ಸಕನ ಸಲಹೆ ಕೋರಿದ. ಈತನ ಕಿವುಡಿಗೆ ಬೊಜ್ಜೋ ಕಾರಣವೆಂದು ಅರಿತ ವೈದ್ಯ ಈತ ತೆಳುಮಾಂಸ ಮೀನು ಹಾಗೂ ಸುಟ್ಟ ಬ್ರೆಡ್ ಮಾತ್ರ ತೆಗೆದುಕೊಳ್ಳುವಂತೆ ವಿಧಿಸಿದ. ಸಾಧಾರಣ ಬ್ರೆಡ್, ಬೆಣ್ಣೆ, ಹಾಲು, ಸಕ್ಕರೆ, ಗಟ್ಟಿಸಾರು, ಆಲೂಗಡ್ಡೆ, ಬಿಯರ್ ಮುಂತಾದವನ್ನು ವರ್ಜಿಸುವಂತೆ ಹೇಳಿದ.

	ಈ ಆಹಾರ ಬ್ಯಾಂಟಿಂಗನ ತೂಕವನ್ನು 20 ಕೆಜಿಯಷ್ಟು ಕಡಿಮೆ ಮಾಡಿತು. ಅಲ್ಲದೆ ಇವನ ಆರೋಗ್ಯ ಉತ್ತಮವಾಯಿತು. ತನಗೆ ದೊರಕಿದ ಈ ಅನುಭವ ಲಾಭವನ್ನು ಇತರರಿಗೂ ತಿಳಿಸುವ ಉದ್ದೇಶದಿಂದ ಈತ 1863ರಲ್ಲಿ ತನ್ನ ಈ ಆಹಾರ ಬದಲಾವಣೆ ಕ್ರಮದ ಅನುಭವವನ್ನು ಅನುಸರಿಸಿ ಎ ಲೆಟರ್ ಆನ್ ಕಾಪ್ರ್ಯುಲೆನ್ಸ್ ಎಂಬ ಲೇಖನವನ್ನು ಎಲ್ಲರಿಗೂ ಅರ್ಥವಾಗುವಂತೆ ಬರೆದು ಪ್ರಕಟಿಸಿದ. ಇದು ಜನಪ್ರಿಯವಾಗಿ ಸಹಸ್ರಾರು ಪ್ರತಿಗಳು ಮಾರಾಟವಾದುವು. ಈ ಆಹಾರ ಕಡಿತಕ್ರಮದಿಂದ ತೂಕ ಕಡಿಮೆಮಾಡುವ ಮಾರ್ಗ ಈತನಿಂದ ಪ್ರಸಿದ್ಧವಾಗಿ ಬ್ಯಾಂಟಿಂಗಿಸಮ್ ಬ್ಯಾಂಟ್ ಮಾಡುವಿಕೆ ಮುಂತಾದ ಹೊಸ ಮನೆ ಮಾತುಗಳು ಹುಟ್ಟಿಕೊಂಡುವು.												(ಎ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ